ಬೆಂಗಳೂರು : ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕೋಟಾದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದರು. ನಾವುಗಳು ಕಾಂಗ್ರೆಸ್ ಪಕ್ಷದ ಭಾಗವಾಗಿ, ನಮ್ಮ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವುದರ ಮೂಲಕ ಆಂದೋಲನ ಪ್ರಾರಂಭಿಸಲಿದ್ದೇವೆ. NEET ಪಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಇಡೀ ರಾಷ್ಟ್ರವ್ಯಾಪಿ ಚಳುವಳಿ ಹಮ್ಮಿಕೊಳ್ಳಲಿದ್ದೇವೆ ಮತ್ತು ರಾಹುಲ್ ಗಾಂಧಿ ಅವರು ಸಂಸತ್ತು ಹಾಗೂ ಈ ದೇಶದ ಬೀದಿಗಳಲ್ಲಿ ಕೇಳಿದ ಪ್ರಶ್ನೆಗಳಂತೆ, ನಾವು ಶಿಕ್ಷಣ ವ್ಯವಸ್ಥೆಯ ಪ್ರಸ್ತುತ ಸ್ಥಿತಿ ಮತ್ತು ಪ್ರಸ್ತುತ ಪರೀಕ್ಷಾ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದು ಸಂಸದರಾದ ಶ್ರೀಮತಿ ವರ್ಷಾ ಗಾಯಕ್ವಾಡ್ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದೇ ಜೂನ್ 25 ರಿಂದ ಆಗಸ್ಟ್ 9 ರವರೆಗೆ ನಲವತ್ತು ದಿನಗಳ ಕಾಲ ಅಭಿಯಾನ ನಡೆಸಲಿದ್ದೇವೆ. ಈ ಅಭಿಯಾನವನ್ನು ಇಪ್ಪತ್ತೆಂಟು ರಾಜ್ಯಗಳು ಮತ್ತು ಇಪ್ಪತ್ತೆಂಟು ನಗರಗಳಲ್ಲಿ ನಡೆಸಲಾಗುವುದು.
ಇದು ಪ್ರಶ್ನೆಪತ್ರಿಕೆ ಸೋರಿಕೆಯಲ್ಲ. ಇದು ದೇಶದ ಶಿಕ್ಷಣದ ಸಂಪೂರ್ಣ ಸ್ಥಿತಿಯ ಅಥವಾ ಒಟ್ಟಾರೆಯಾಗಿ ಪರೀಕ್ಷಾ ವ್ಯವಸ್ಥೆಯ ವೈಫಲ್ಯ. ವಿದ್ಯಾರ್ಥಿಗಳು ಫೇಲ್ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅನುತ್ತೀರ್ಣರಾಗುತ್ತಿರುವುದು ವಿದ್ಯಾರ್ಥಿಗಳಲ್ಲ, ಶಿಕ್ಷಣ ಸಚಿವಾಲಯ ಅನುತ್ತೀರ್ಣವಾಗುತ್ತಿದೆ. ಮತ್ತು ಎನ್ಡಿಎ ಸರ್ಕಾರ ಅನುತ್ತೀರ್ಣವಾಗುತ್ತಿದೆ. ಇವರ ವೈಫಲ್ಯದಿಂದ ನಮ್ಮ ಮಕ್ಕಳು ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ.
ನಾವು ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳಲ್ಲಿ ಭ್ರಷ್ಟಾಚಾರದ ಏರಿಕೆಯ ವಿರುದ್ದ ವಿದ್ಯಾರ್ಥಿಗಳು ಕುದಿಯುತ್ತಿದ್ದಾರೆ. ಇಪ್ಪತ್ತೆಂಟು ನಗರಗಳಲ್ಲಿ ನಲವತ್ತು ದಿನಗಳವರೆಗೆ ನಡೆಯುವ ಈ ಅಭಿಯಾನದ ಮೂಲಕ ವಿದ್ಯಾರ್ಥಿ ಧ್ವನಿಯ ಚಳುವಳಿಯನ್ನು ಆರಂಭಿಸುತ್ತಿದ್ದೇವೆ.
ಕೇಂದ್ರದಲ್ಲಿರುವ ಜವಾಬ್ದಾರಿಯುತ ವಿರೋಧ ಪಕ್ಷವಾಗಿ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಮ್ಮ ದೇಶದ ಸಂಪತ್ತು, ದೇಶದ ಆಸ್ತಿ ಮತ್ತು ದೇಶದ ಭವಿಷ್ಯವಾಗಿದ್ದರೆ, ಅದು ನಮ್ಮ ಮಕ್ಕಳು ಮಾತ್ರ. ಅವರಿಗೆ ಉತ್ತಮ ವ್ಯವಸ್ಥೆ ಮತ್ತು ಉತ್ತಮ ಶಿಕ್ಷಕರ ಜವಾಬ್ದಾರಿಯನ್ನು ಒದಗಿಸುವುದು ನಮ್ಮ ಸಂಪೂರ್ಣ ಕರ್ತವ್ಯ. ಅದಕ್ಕಾಗಿಯೇ ಈ ಅಭಿಯಾನ ನಡೆಸುತ್ತಿದ್ದೇವೆ.
ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದನ್ನು, ವಿಳಂಬ ಮಾಡುವುದನ್ನು ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾವು ಪ್ರತಿ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಅವರೊಂದಿಗೆ ಮಾತನಾಡುತ್ತೇವೆ ಮತ್ತು ಅವರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ನೀಡುತ್ತೇವೆ. ಅವರ ಕಳವಳಗಳನ್ನು ಶಿಕ್ಷಣ ಸಚಿವಾಲಯ ಮತ್ತು ಪ್ರಧಾನ ಮಂತ್ರಿಗಳಿಗೆ ತಿಳಿಸಬೇಕಾಗಿದೆ. ಅವರ ಮಾತುಗಳನ್ನು ಕೇಳಿದ ನಂತರ, ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಾಡಬೇಕಾದ ಬದಲಾವಣೆಗಳನ್ನು ಪರಿಹರಿಸಲು ನಾವು ಒಂದು ಆಂದೋಲನವನ್ನು ಪ್ರಾರಂಭಿಸುತ್ತೇವೆ.
ಆಗಸ್ಟ್ 1 ರಂದು ವಿದ್ಯಾರ್ಥಿ ಯಾತ್ರೆ ನಡೆಯಲಿದೆ ಮತ್ತು 9 ರಂದು "ಚಲೋ ದೆಹಲಿ" ಅಭಿಯಾನ ನಡೆಯಲಿದೆ. ಈ ಮೂಲಕ ನಾವು ದೆಹಲಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ವಿದ್ಯಾರ್ಥಿಗಳ ಧ್ವನಿ ದೆಹಲಿಗೆ ತಲುಪಲಿದೆ, ಇದು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಪ್ರತಿಧ್ವನಿಸುತ್ತದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಯಾವ ಬದಲಾವಣೆಗಳನ್ನು ಮಾಡಲು ಬಯಸುತ್ತೇವೆ ಎಂಬುದನ್ನು ನಾವು ಅಲ್ಲಿ ಪ್ರಸ್ತುತಪಡಿಸುತ್ತೇವೆ. 
ನಮ್ಮ ಮೂರು ಬೇಡಿಕೆಗಳನ್ನು ಚರ್ಚಿಸಲು ಬರುತ್ತಿದ್ದೇವೆ. ನಾವು ನೀಟ್ ಮತ್ತು ಯುಜಿಸಿ ಬಗ್ಗೆ ಚರ್ಚಿಸಿದ್ದೇವೆ, ಆದರೆ ವಿವಿಧ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪತ್ರಿಕೆ ಸೋರಿಕೆಯ ಬಗ್ಗೆ ಕ್ರಮ ಕೈಗೊಳ್ಳುವ ಸಮಯ ಬಂದಿದೆ.
ನಾವು ಹಲವಾರು ಪ್ರತಿಭಟನೆಗಳನ್ನು ಆಯೋಜಿಸಿದ್ದೇವೆ. ಯುವ ಕಾಂಗ್ರೆಸ್ ಮತ್ತು ಎನ್ ಎಸ್ ಯುಐ ಮೂಲಕ ದೇಶಾದ್ಯಂತ ಸುಮಾರು 200 ಪ್ರತಿಭಟನೆಗಳು ನಡೆದಿವೆ. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅವರು ತಕ್ಷಣವೇ ರಾಜೀನಾಮೆ ಕೊಡಬೇಕು.
ಆದರೆ ದೇಶದ ಶಿಕ್ಷಣ ಸಚಿವರು ತೆರೆಮರೆಯಲ್ಲಿ ರಾಜಕಾರಣ ಮಾಡಿ ಅಡಗಿಕೊಂಡು ಉತ್ತರ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮೊದಲ ಬೇಡಿಕೆ. ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ಉನ್ನತ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಈ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಇದು ನಮ್ಮ ಮೊದಲ ಬೇಡಿಕೆ.
ನಮ್ಮ ಎರಡನೇ ಬೇಡಿಕೆಯೆಂದರೆ ಇಡೀ ಪರೀಕ್ಷಾ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಏನು ಸುಧಾರಿಸಬಹುದು ಎಂಬುದರ ಕುರಿತು ಕೆಲಸ ಮಾಡಬೇಕು. ಪಶ್ನೆ ಪತ್ರಿಕೆ ಸಂಯೋಜನೆಯಿಂದ ಮುದ್ರಣದವರೆಗೆ ಪರೀಕ್ಷಾ ಕೊಠಡಿಗೆ ಸಾಗಿಸುವುದರ ಕುರಿತೂ ಹೊಸ ವ್ಯವಸ್ಥೆ ಜಾರಿಗೆ ತರಬೇಕು.
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಒಂದು ಮಗು ಎರಡು ವರ್ಷಗಳ ಕಾಲ ತುಂಬಾ ಕಷ್ಟಪಟ್ಟು ಅಧ್ಯಯನ ಮಾಡುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವನ ಹೆತ್ತವರು ಮತ್ತು ಅವನ ಇಡೀ ಕುಟುಂಬ ಅವನೊಂದಿಗೆ ಕನಸು ಕಾಣುತ್ತಾ ಇರುತ್ತದೆ. ಆತ ಅಥವಾ ಅವಳು ಪರೀಕ್ಷೆ ಬರೆಯಲು ಹೋದಾಗ, ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿದರೆ ಅವರಿಗೆ ಏನಾಗಬಹುದು.
10 ವರ್ಷಗಳಲ್ಲಿ ಸುಮಾರು 89 ಪರೀಕ್ಷೆಗಳ ಪತ್ರಿಕೆ ಸೋರಿಕೆಯಾಗಿದೆ ಮತ್ತು ಇದು ಈ ಸರ್ಕಾರದ ಅತಿದೊಡ್ಡ ವೈಫಲ್ಯವಾಗಿದೆ. 48 ಪರೀಕ್ಷೆಗಳನ್ನು ಮರುಪರೀಕ್ಷೆ ಮಾಡಲಾಯಿತು. 22 ಪರೀಕ್ಷೆಗಳನ್ನು ನಡೆಸುವ ಮೊದಲೇ ರದ್ದುಗೊಳಿಸಲಾಯಿತು.
ಇದಲ್ಲದೆ, ಜೂನ್ 26, 2014 ರ ಇಂಡಿಯಾ ಟುಡೇ ವರದಿಯ ಪ್ರಕಾರ, 2019 ರ ನಂತರ, ನೀಟ್ ಮತ್ತು ಯುಜಿಸಿ ಪರೀಕ್ಷೆಗಳನ್ನು ಹೊರತುಪಡಿಸಿ, ಕನಿಷ್ಠ 64 ಪ್ರಮುಖ ಪರೀಕ್ಷೆಗಳು ನಡೆದವು, ಇವೆಲ್ಲವೂ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಕ್ಕೆ ಗುರಿಯಾಗಿದ್ದವು.
ಸರಿಸುಮಾರು 19 ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಸರ್ಕಾರಿ ಪರೀಕ್ಷೆಗಳ ಬಗ್ಗೆಯೂ ಒಂದು ವರದಿ ಹೊರಬಂದಿದೆ. 45 ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕನಿಷ್ಠ 27 ರದ್ದಾಗಿವೆ. ಈ ಹಗರಣದಿಂದ ಗುಜರಾತ್ ರಾಜ್ಯ ಕೂಡ ಹಿಂದೆ ಬಿದ್ದಿಲ್ಲ.
ಗುಜರಾತ್ ನೇಮಕಾತಿ ಹಗರಣದ ವರದಿಯನ್ನು ನೋಡಿದರೆ, 11 ವರ್ಷಗಳಲ್ಲಿ ಗುಜರಾತ್ನಲ್ಲಿ 11 ಪತ್ರಿಕೆಗಳು ಸೋರಿಕೆಯಾಗಿವೆ. ಹತ್ತು ಪ್ರಕರಣಗಳಲ್ಲಿ ಮಾತ್ರ ಚಾರ್ಜ್ಶೀಟ್ ದಾಖಲಿಸಲಾಗಿದೆ.
ಮೊದಲನೆಯದಾಗಿ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು, ಜೊತೆಗೆ ಅವರೊಂದಿಗೆ ಕೆಲಸ ಮಾಡುವ ಎಲ್ಲರನ್ನೂ ತನಿಖೆ ಮಾಡಬೇಕು. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ನಾನು ಹೇಳಿದಂತೆ, ಪರೀಕ್ಷೆಯನ್ನು ಹೇಗೆ ಸುಧಾರಿಸುವುದು, ಅದನ್ನು ನಿಯಂತ್ರಿಸುವುದು ಮತ್ತು ಅದನ್ನು ಉತ್ತಮವಾಗಿ ನಡೆಸುವುದು ಹೇಗೆ ಎಂದು ಚಿಂತನೆ ಮಾಡಬೇಕು.
ಪರೀಕ್ಷೆಗಳ ನಂತರ ವಿದ್ಯಾರ್ಥಿಗಳು ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯುವ ರೀತಿಯಲ್ಲಿ ಉದ್ಯೋಗಗಳು ಮತ್ತು ಪರೀಕ್ಷೆಗಳನ್ನು ಹೇಗೆ ಸಂಘಟಿಸುವುದು. ಅದನ್ನು ಹೇಗೆ ಸಂಯೋಜಿಸುವುದು? ಇಡೀ ವರ್ಷದ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸಬೇಕು.
ವಿದ್ಯಾರ್ಥಿ ಆಂದೋಲನದ ಮೂಲಕ ಅತಿ ದೊಡ್ಡ ಚಳುವಳಿ ಆಗಸ್ಟ್ 9 ರಂದು ನಡೆಯಲಿದೆ. ಈ ಮಧ್ಯೆ, ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ನವರು ಎಲ್ಲಾ ಕಡೆ ತೆರಳಿ ಸಾಧ್ಯವಾದಷ್ಟು ಯುವಕರನ್ನು ಭೇಟಿ ಮಾಡಬೇಕು. ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ಮಾಡಿ ಮಕ್ಕಳ ಭವಿಷ್ಯವು ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕು.
ಶಿಕ್ಷಣ ಮತ್ತು ಆರೋಗ್ಯ, ನಮ್ಮ ಮೂಲಭೂತ ಅಗತ್ಯಗಳು. ಕೇಂದ್ರ ಸರ್ಕಾರವು ಇದನ್ನು ಯಾವುದೇ ಭ್ರಷ್ಟಾಚಾರವಿಲ್ಲದೇ ಒದಗಿಸಬೇಕೆಂದು ನಮ್ಮ ಆಗ್ರಹ. ಏಕೆಂದರೆ ಅವುಗಳನ್ನು ದೇಶದ ಸಂವಿಧಾನದ ಮೂಲಕ ಒದಗಿಸಲಾಗಿದೆ. ನಾವು ಸೋರಿಕೆ ರಹಿತ ಪರೀಕ್ಷೆಗಳನ್ನು ಎದುರು ನೋಡುತ್ತಿದ್ದೇವೆ.
*ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರ ಮಾತುಗಳು*
ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದು ಮನೆಗೆ ಬಂದ ತಕ್ಷಣ ಬಹಳ ನೆಮ್ಮದಿಯಿಂದ ಇರುತ್ತಾನೆ. ಪೇಪರ್ ಲೀಕ್ ಆದ ಕಾರಣಕ್ಕೆ ನಾಳೆ ಮತ್ತೆ ಪರೀಕ್ಷೆ ಬರೀಬೇಕು ಅಂದರೆ ಎಷ್ಟು ಒತ್ತಡ ಆಗುತ್ತದೆ ಎನ್ನುವುದು ಅವರಿಗೆ ಅವರ ಕುಟುಂಬದವರಿಗೆ ಮಾತ್ರ ತಿಳಿದಿರುತ್ತದೆ.
ಸಾಲ ಮಾಡಿ ಹಣಕಟ್ಟಿ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ಅದರ ಕಷ್ಟ ತಿಳಿದಿದೆ. ಎಷ್ಟೋ ವಿದ್ಯಾರ್ಥಿಗಳು ಕೆಲಸ ಮಾಡಿ ಅದರಿಂದ ಬಂದ ಹಣದಲ್ಲಿ ಓದಿ ಪರೀಕ್ಷೆ ಬರೆಯಲು ಹೋಗುತ್ತಾರೆ. ಪರೀಕ್ಷೆಗಳಲ್ಲಿ ಹಗರಣ ನಡೆದರೆ ಈ ವ್ಯವಸ್ಥೆಯನ್ನು ಏನೆಂದು ಕರೆಯುವುದು? ವಿದ್ಯಾರ್ಥಿಗಳು ಮಾತ್ರ ನೋವು ಅನುಭವಿಸುವುದಿಲ್ಲ. ಆತನ ಕುಟುಂಬವು ಸಹ ಬಹಳಷ್ಟು ನೋವಿಗೆ ಈಡಾಗುತ್ತೆ.
ಎನ್ ಟಿಎ ಭ್ರಷ್ಟಾಚಾರದಲಲಿ ಮುಳುಗಿದೆ. ನೂರಕ್ಕೂ ಹೆಚ್ಚು ಬಾರಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ. ಕೇಂದ್ರ ಸರ್ಕಾರ ತನ್ನ ವೈಫಲ್ಯದ ಬಗ್ಗೆ ಹೊಣೆಗಾರಿಕೆ ಹೊರುತ್ತಿಲ್ಲ. ಕೆಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೊನ್ನೆ ಪರೀಕ್ಷೆ ಆದ ತಕ್ಷಣ ಆಚೆ ಬಂದು ಹೇಳ್ತಾರೆ, "ಯಾವುದೇ ತೊಂದರೆಯಾಗಿಲ್ಲ, ನೀಟಾಗಿ ಆಗಿದೆ" ಅಂತ.
ಆರ್ಮಿಯನ್ನ ಉಪಯೋಗಿಸಿಕೊಂಡು ಪ್ರಶ್ನೆಪತ್ರಿಕೆಗಳನ್ನು ತರುತ್ತಿದ್ದೀರಿ. ಇದರ ಬದಲು ಯುದ್ಧವನ್ನೇ ಮಾಡಿ ಮುಗಿಸಬಹುದಿತ್ತು. ನಿಮ್ಮ ಬೇಜವಾಬ್ದಾರಿಯಿಂದ ಸೈನ್ಯವನ್ನ ಎಲ್ಲಿ ಹೇಗೆ ಬಳಸೇಕು ಎಂಬುದು ಗೊತ್ತಿಲ್ಲ. ದೇಶದ ಒಳಗಿನ ಜನರ ಮೇಲೆ ಸೈನ್ಯ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು.
ವಿದ್ಯಾರ್ಥಿಗಳ ಪರವಾಗಿ ನಿಲ್ಲುವಂತ ಕೆಲಸವನ್ನ ಮಾಡಬೇಕು. ರಾಹುಲ್ ಗಾಂಧಿಯವರ ಉದ್ದೇಶ ಈ ಹೋರಾಟ ಪಕ್ಷಾತೀತವಾಗಿ ಆಗಬೇಕು ಎಂಬುದಾಗಿದೆ. ಬರುವ ಶನಿವಾರ ಎಲ್ಲಾ ವಿದ್ಯಾರ್ಥಿ ಸಂಘಟನೆಗಳನ್ನು ನಾವು ಶಾಸಕರ ಭವನದಲ್ಲಿ ಸಭೆ ಕರೆಯಲಾಗಿದೆ. ದುಂಡು ಮೇಜಿನ ಸಭೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು.
ವಿದ್ಯಾರ್ಥಿನ ನಾಯಕರ ಜೊತೆ ನಾವು ಕೂಡ ಮಾತಾಡಿ ಎಲ್ಲಾ ಕಾಲೇಜುಗಳಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು. ನಮ್ಮಲ್ಲಿ ಅತಿ ಹೆಚ್ಚು ಅಂದರೆ ಎಂಬತ್ತೊಂಬತ್ತು ವಿಶ್ವವಿದ್ಯಾಲಯಗಳಿವೆ. ಅತಿ ಹೆಚ್ಚು ಬೆಂಗಳೂರಲ್ಲೇ ಇದ್ದು, ಹದಿನೆಂಟು ಡೀಮ್ಡ್ ಯೂನಿವರ್ಸಿಟಿಗಳಿವೆ.
ಪ್ರತಿ ಕಾಲೇಜು, ಶಾಲಾ ಕೊಠಡಿಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳನ್ನು ಮಾತನಾಡಿಸಿ ಪಶ್ನೆ ಪತ್ರಿಕೆ ಸೋರಿಕೆ ವಿರುದ್ದ ಜಾಗೃತಿ ಮೂಡಿಸಲಾಗುವುದು. ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ಪದಾಧಿಕಾರಿಗಳು ಎಲ್ಲಾ ವಿದ್ಯಾರ್ಥಿಗಳು ಈ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕು. ಹಾಗೂ ನೋಂದಣಿ ಮಾಡಿಕೊಳ್ಳಬೇಕು. ಆಲ್ಫಾ ಮತ್ತು ಜೆನ್ ಜಿ ವಿದ್ಯಾರ್ಥಿಗಳ ಪರವಾಗಿ ರಾಹುಲ್ ಗಾಂಧಿಯವರು ಮಾತನಾಡಿದ್ದಾರೆ.
ಇದು ಒಂದು ಪಕ್ಷದ ಹೋರಾಟ ಆಗಿರೋದಿಲ್ಲ. ಇದು ವಿದ್ಯಾರ್ಥಿಗಳ ಪರವಾಗಿ ಒಬ್ಬ ನಾಯಕ ನಿಂತು ಮುನ್ನಡೆಸುವ ಕೆಲಸವನ್ನ ರಾಹುಲ್ ಗಾಂಧಿಯವರು ಮಾಡುತ್ತಿದ್ದಾರೆ. ಅದಕ್ಕೆ ನಾವು ಬೆನ್ನೆಲುಬಾಗಿ ನಿಂತಿದ್ದೇವೆ.
ಎಐಡಿಎಸ್ ಓ, ಎಸ್ ಎಫ್ ಐಗಳನ್ನು ಸಹ ಈ ಹೋರಾಟದಲ್ಲಿ ಜೊತೆಯಾಗಿ ಕರೆದುಕೊಂಡು ಹೋಗಲಾಗುವುದು. ಇಂಡಿಯಾ ಒಕ್ಕೂಟದಲ್ಲಿ ಯಾವ, ಯಾವ ವಿದ್ಯಾರ್ಥಿ ಸಂಘಟನೆ ಬರುತ್ತೆ, ಎಲ್ಲಾ ವಿದ್ಯಾರ್ಥಿ ಸಂಘಟನೆಯನ್ನ ಕರೆದು ಈ ಒಂದು ಹೋರಾಟವನ್ನ ಮಾಡೋದಕ್ಕೆ ನಾವು ಹೊರಟಿದ್ದೀವಿ.
ಪ್ರಶ್ನೆಪತ್ರಿಕೆ ಸೋರಿಕೆಗಳು ಪದೇ ಪದೇ ಆಗುತ್ತಿದ್ದು ಕೇಂದ್ರ ಸರ್ಕಾರ ಇದರ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. 2024 ರಲ್ಲಿ ಕೂಡ ಸಿಬಿಐ ತನಿಖೆ ನಡೆದಿದೆ. ಈಗ 2026 ರಲ್ಲೂ ಕೂಡ ಸಿಬಿಐ ತನಿಖೆ ನಡೆಸಿದೆ. ಎಷ್ಟು ಜನಕ್ಕೆ ಶಿಕ್ಷೆ ಆಗಿದೆ? ತಪ್ಪು ಮಾಡಿದವರಿಗೆ ಮೊದಲು ಶಿಕ್ಷೆ ಕೊಡಿಸುವಂತ ಕೆಲಸವನ್ನ ಕೇಂದ್ರ ಸರ್ಕಾರ ಮಾಡಬೇಕು.
ಹದಿನೆಂಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಗಳು ನೋವಲ್ಲಿ ಇದಾವೆ. ತಂದೆ ತಾಯಂದಿರನ್ನ ಸಾಂತ್ವನ ಮಾಡುವುದಕ್ಕಾದರೂ ಕೇಂದ್ರ ಸರ್ಕಾರದಿಂದ ಯಾರೂ ಬರುತ್ತಿಲ್ಲ.
ಯುವಜನತೆಯನ್ನು ಮತಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ ಹೊರತು ಅವರ ವಿದ್ಯಾಭ್ಯಾಸಕ್ಕಾಗಿ, ಅವರ ಮುಂದಿನ ಜೀವನಾಂಶಕ್ಕಾಗಿ ಯಾವತ್ತೂ ಕೂಡ ಕೇಂದ್ರ ಸರ್ಕಾರ ಆಲೋಚಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಒಂದು ಉನ್ನತ ಪರೀಕ್ಷೆಯನ್ನು ಹೇಗೆ ನಡೆಸಬೇಕು ಎನ್ನುವ ಆಲೋಚನೆಯಿಲ್ಲ. ಅವರಿಗೆ ಸ್ಕಿಲ್ ಇರುವುದು ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವುದು, ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವುದು, ಅಕ್ರಮ ಮಾಡಬೇಕು, ಅಕ್ರಮ ಚುನಾವಣೆ ಮಾಡಬೇಕು ಎಂಬುದು ಮಾತ್ರ.
ಇಂತಹ ಕೌಶಲ್ಯವನ್ನ ಅಮಿತ್ ಶಾ, ಮೋದಿಯವರು ಬಹಳ ಚೆನ್ನಾಗಿ ಹೊಂದಿದ್ದಾರೆ. ಇದರ ವಿರುದ್ಧ ರಾಹುಲ್ ಗಾಂಧಿಯವರು ಧ್ವನಿ ಎತ್ತಿದ್ದಾರೆ. 2029 ರವರೆಗೂ ಕೂಡ ನಾವು ರಾತ್ರಿ ಹಗಲು ಒಂದಲ್ಲ ಒಂದು ಹೋರಾಟದಲ್ಲಿ ಬಾಗಿಯಾಗಲೇಬೇಕು.
ಈ ಸಂದರ್ಭದಲ್ಲಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಶ್ರೀ ರಮೇಶ್ ಬಾಬು, ರಾಜ್ಯ ಎನ್ ಎಸ್ ಯು ಐ ಉಪಾಧ್ಯಕ್ಷ ಜಯೇಂದ್ರ ಶಾಹಿ, ರಾಜ್ಯ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಶ್ರೀ ಶ್ರೀಧರ್ ಜಾದವ್, ಶಾಸಕ ಪ್ರದೀಪ್ ಈಶ್ವರ್ ಉಪಸ್ಥಿತರಿದ್ದರು.