LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾರಾಷ್ಟ್ರದ ಕೃಷ್ಣಾ ನದಿ ನೀರು ತಿರುವು ಯೋಜನೆಗೆ ತೀವ್ರ ಆಕ್ಷೇಪ

ಬೆಂಗಳೂರು: ಕೃಷ್ಣಾ ನದಿಯ 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಮಹಾರಾಷ್ಟ್ರದ ಭೀಮಾ ನದಿಗೆ ತಿರುಗಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಯೋಜನೆ ಕೈಗೆತ್ತಿಕೊಂಡಿದೆ ಎಂದು ಸ್ವತಃ ಆ ರಾಜ್ಯದ ಮುಖ್ಯಮಂತ್ರಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು, ಈ ಪ್ರಸ್ತಾವಿತ ಯೋಜನೆಯು ಕರ್ನಾಟಕದ ಹಿತಾಸಕ್ತಿಗಳಿಗೆ ಗಂಭೀರ ಧಕ್ಕೆ ಉಂಟು ಮಾಡಲಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವರೂ ಎಂ.ಬಿ. ಪಾಟೀಲ ಭಾನುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.news_1793546038_0_225.webp

ಅಲ್ಲದೆ, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–II (KWDT-II)ಯ ತೀರ್ಪಿನ ವ್ಯಾಪ್ತಿಗೆ ಒಳಪಡದ ಈ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಯಾವ ಆಧಾರದ ಮೇಲೆ ಕೈಗೆತ್ತಿಕೊಂಡಿದೆ ಮತ್ತು ಇದಕ್ಕೆ ವಿಶ್ವ ಬ್ಯಾಂಕ್ ನಿಂದ ಹಣಕಾಸು ನೆರವು ಪಡೆಯಲು ಹೇಗೆ ಸಾಧ್ಯವಾಗಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಕ್ಟೋಬರ್ 9ರಂದು ಮುಂಬೈನಲ್ಲಿ ನಡೆದ ‘ಇಂಡಿಯಾ ಟುಡೇ ಕಾನ್ ಕ್ಲೈವ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಾಬಲೇಶ್ವರದ ಸಮೀಪ ಕೃಷ್ಣಾ ನದಿಯಿಂದ ಸುಮಾರು 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜ್ಜನಿ ಅಣೆಕಟ್ಟಿಗೆ ತಿರುಗಿಸುವ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ನೀರನ್ನು ಮರಾಠವಾಡದ ಎರಡು ಜಿಲ್ಲೆಗಳು ಹಾಗೂ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕೆಲವು ಭಾಗಗಳಿಗೆ ಪೂರೈಸುವ ಉದ್ದೇಶವಿದೆ.

 ಯೋಜನೆಯ ಕಾಮಗಾರಿ ಆರಂಭವಾಗಿದ್ದು, ವಿಶ್ವ ಬ್ಯಾಂಕ್ ಹಣಕಾಸು ನೆರವು ನೀಡುತ್ತಿದೆ ಎಂದೂ ಅವರು ಹೇಳಿದ್ದಾರೆಂದು ಸಚಿವರು ವಿವರಿಸಿದ್ದಾರೆ. ಇದೇ ವೇಳೆ, ದೇವೇಂದ್ರ ಪಡ್ನವೀಸ್ ಅವರು ಈ ಕುರಿತು ಮಾತನಾಡಿರುವ ವಿಡಿಯೊ ತುಣುಕನ್ನು ಕೂಡ ಸಚಿವರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಲಾಗುವುದು. ಇಂತಹ ವಿಷಯಗಳಲ್ಲಿ ಪಕ್ಷಾತೀತವಾಗಿ ಧ್ವನಿಯೆತ್ತಿ ರಾಜ್ಯದ ಹಿತರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

“ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು 2026ರ ಜುಲೈನಲ್ಲಿ ₹24 ಕೋಟಿ ಮಂಜೂರು ಮಾಡಿದೆ. ಈ ಸಂಬಂಧ, ಸುಮಾರು 84 ಕಿ.ಮೀ. ಉದ್ದದ ಮಾರ್ಗದಲ್ಲಿ ಭೂವೈಜ್ಞಾನಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ. 2026ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗುವ ನಿರೀಕ್ಷೆಯಿದ್ದು, ಈ ಯೋಜನೆಗೆ ಸುಮಾರು ₹19,000 ಕೋಟಿಯನ್ನು ಅಂದಾಜು ವೆಚ್ಚ ಮಾಡಲು ಉದ್ದೇಶಿಸಿದೆ” ಎಂದು ಅವರು ವಿವರಿಸಿದ್ದಾರೆ.

ಆದರೆ, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2ರ ತೀರ್ಪು ಮತ್ತು ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ಕಾನೂನು ಬಾಧ್ಯಸ್ಥಿಕೆಯ ಹಿನ್ನೆಲೆಯಲ್ಲಿ ಈ ಪ್ರಸ್ತಾವಿತ ಯೋಜನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯಮಂಡಳಿಯು ಶೇಕಡಾ 75ರ ಅವಲಂಬನೀಯತೆಯ ಆಧಾರದ ಮೇಲೆ ಲಭ್ಯವಿರುವ 2,130 ಟಿಎಂಸಿ ಅಡಿ ನೀರಿನ ಜೊತೆಗೆ, ಶೇಕಡಾ 65ರ ಅವಲಂಬನೀಯತೆ ಹಾಗೂ ಸರಾಸರಿ ಲಭ್ಯತೆಯ ಆಧಾರದ ಮೇಲೆ ಹೆಚ್ಚುವರಿಯಾಗಿ 448 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ. ಈ ಹೆಚ್ಚುವರಿ ನೀರಿನಲ್ಲಿ ಮಹಾರಾಷ್ಟ್ರಕ್ಕೆ 81 ಟಿಎಂಸಿ ಅಡಿ, ಕರ್ನಾಟಕಕ್ಕೆ 173 ಟಿಎಂಸಿ ಅಡಿ ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ 194 ಟಿಎಂಸಿ ಅಡಿ ಹಂಚಿಕೆಯಾಗಿದೆ ಎಂದು ಪಾಟೀಲ ಅವರು ವಿವರಿಸಿದರು.

ನ್ಯಾಯಮಂಡಳಿಯ ತೀರ್ಪಿನ ಷರತ್ತು 16ರ (XVI) ಪ್ರಕಾರ, 2050ರ ಮೇ 31ರ ನಂತರ ಯಾವುದೇ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಮಂಡಳಿಯು ನೀರಿನ ಹಂಚಿಕೆ ಆದೇಶವನ್ನು ಮರುಪರಿಶೀಲಿಸಲು ಅಥವಾ ಪರಿಷ್ಕರಿಸಲು ಅವಕಾಶವಿದೆ. ಅಲ್ಲಿಯವರೆಗೆ 2,578 ಟಿಎಂಸಿ ಅಡಿಗಿಂತ ಹೆಚ್ಚುವರಿಯಾಗಿ ಲಭ್ಯವಾಗುವ ನೀರನ್ನು ಬಳಸಲು ಆಂಧ್ರಪ್ರದೇಶಕ್ಕೆ ಅವಕಾಶ ನೀಡಲಾಗಿದೆಯಾದರೂ, ಅಂತಹ ಬಳಕೆಯಿಂದಾಗಿ ಉಳಿದ ನೀರಿನ ಮೇಲೆ ಯಾವುದೇ ಶಾಶ್ವತ ಹಕ್ಕು ಸ್ಥಾಪನೆಯಾಗುವುದಿಲ್ಲ. ಹೀಗಾಗಿ, 2050ರ ನಂತರ ಹೆಚ್ಚುವರಿಯಾಗಿ ಲಭ್ಯವಾಗುವ ನೀರನ್ನು ನದಿ ಜಲಾನಯನ ಪ್ರದೇಶದ ರಾಜ್ಯಗಳ ನಡುವೆ ಮರುಹಂಚಿಕೆ ಮಾಡುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದ ನೀರಿನ ಹಂಚಿಕೆಗೆ ಅಡ್ಡಿಯಾಗುವ ರೀತಿಯಲ್ಲಿ ಈಗಲೇ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳುವುದು ಎಷ್ಟು ಸಮರ್ಥನೀಯ ಎಂದು ಪಾಟೀಲ ಅವರು ಪ್ರಶ್ನೆ ಮಾಡಿದ್ದಾರೆ.

ಇದಲ್ಲದೆ, ಮಹಾರಾಷ್ಟ್ರ ಸರ್ಕಾರವು ಕೃಷ್ಣಾ–ಭೀಮಾ ಜಲಸ್ಥಿರೀಕರಣ ಯೋಜನೆಯಡಿ ಕೃಷ್ಣಾ ಮೇಲ್ದಂಡೆ ಉಪಜಲಾನಯನ ಪ್ರದೇಶದಿಂದ (K-1) ಭೀಮಾ ಉಪಜಲಾನಯನ ಪ್ರದೇಶಕ್ಕೆ (K-5) ಸುಮಾರು 35 ಟಿಎಂಸಿ ಅಡಿ ನೀರನ್ನು ವರ್ಗಾಯಿಸುವ ಪ್ರಸ್ತಾವನೆಯನ್ನು ಕೆಡಬ್ಲ್ಯುಡಿಟಿ- 2ರ (KWDT-II) ಮುಂದೆ ಕಾಯ್ದೆಯ ಸೆಕ್ಷನ್ 5(3)ರ ಅಡಿಯಲ್ಲಿ ಮಂಡಿಸಿತ್ತು. ಆದರೆ, ಕೆ-1ದಿಂದ ಕೆ-5ಕ್ಕೆ ದೂರದ ಮಾರ್ಗದಲ್ಲಿ ನೀರನ್ನು ವರ್ಗಾಯಿಸುವುದರಿಂದ ಕೃಷ್ಣಾ ಮೇಲ್ದಂಡೆ ಉಪಜಲಾನಯನ ಪ್ರದೇಶದಲ್ಲಿನ ನೀರಿನ ಹರಿವು ಮತ್ತು ಬಳಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಕಾರಣಕ್ಕೆ ನ್ಯಾಯಮಂಡಳಿಯು ಈ ಪ್ರಸ್ತಾವನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

 ಈ ಹಿನ್ನೆಲೆಯಲ್ಲಿ, ಈಗ ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ 40 ಟಿಎಂಸಿ ಅಡಿ ನೀರು ವರ್ಗಾವಣೆ ಯೋಜನೆಗೆ ಯಾವ ಕಾನೂನುಬದ್ಧ ಆಧಾರವಿದೆ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಹಿಂದಿನ ಪ್ರಸ್ತಾವನೆಯ ಕುರಿತಾಗಿಯೇ ನ್ಯಾಯಮಂಡಳಿಯು ಆಕ್ಷೇಪವಿರುವಾಗ ಅದೇ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅದರಲ್ಲೂ ಕೆಡಬ್ಲ್ಯುಡಿಟಿ- 2ರ ತೀರ್ಪು ಇನ್ನೂ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಕೂಡ ಮಾಡಿಲ್ಲ ಎಂಬ ಕಾರಣ ನೀಡಿ, ಕೇಂದ್ರ ಸರ್ಕಾರವು ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರ ಡಿಪಿಆರ್ ಅನ್ನು ಪದೇ ಪದೇ ಹಿಂದಿರುಗಿಸುತ್ತಿರುವಾಗ, ಮಹಾರಾಷ್ಟ್ರದ ಯೋಜನೆಗೆ ವಿಶ್ವ ಬ್ಯಾಂಕ್ ನಿಂದ ಹಣಕಾಸು ನೆರವು ದೊರೆಯಲು ಹೇಗೆ ಸಾಧ್ಯ ಎಂಬುದು ಅರ್ಥವಾಗುತ್ತಿಲ್ಲ ಎಂದು ಸಚಿವರು ಧ್ವನಿಯೆತ್ತಿದ್ದಾರೆ. ಈ ಯೋಜನೆಯಿಂದ ಕೃಷ್ಣಾ ಮೇಲ್ದಂಡೆ ಉಪಜಲಾನಯನ ಪ್ರದೇಶದಲ್ಲಿ ನೀರಿನ ಹರಿವು ಬದಲಾಗುವ ಸಾಧ್ಯತೆಯಿದ್ದು, ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣದ ಮೇಲೂ ಪರಿಣಾಮ ಉಂಟಾಗಬಹುದು.

ಇದರಿಂದ ಕರ್ನಾಟಕ ಮಾತ್ರವಲ್ಲದೆ, ನದಿಯ ಕೆಳಹಂತದಲ್ಲಿರುವ ಇತರ ರಾಜ್ಯಗಳ ನೀರಿನ ಲಭ್ಯತೆಯ ಮೇಲೂ ದುಷ್ಪರಿಣಾಮ ಉಂಟಾಗುವ ಆತಂಕವಿದೆ. ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ನ್ಯಾಯಮಂಡಳಿಯ ತೀರ್ಪು ಮತ್ತು ರಾಜ್ಯಗಳ ಹಕ್ಕುಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಒಕ್ಕೂಟ ವ್ಯವಸ್ಥೆಯ ಹಿತದೃಷ್ಟಿಯಿಂದ ಸರಿಯಲ್ಲ ಎಂದಿದ್ದಾರೆ. ವಿಶ್ವ ಬ್ಯಾಂಕ್ ನಿಂದ ಇಂತಹ ಯೋಜನೆಗೆ ಹಣಕಾಸು ನೆರವು ದೊರೆಯಲು ಭಾರತ ಸರ್ಕಾರದ ಮಾರ್ಗದರ್ಶನ ಅಥವಾ ಅನುಮೋದನೆ ಇಲ್ಲದೆ ಸಾಧ್ಯವಿದೆಯೇ ಎಂಬುದರ ಬಗ್ಗೆಯೂ ಸ್ಪಷ್ಟನೆ ಬೇಕಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ಅನುಮೋದನೆ ನೀಡಿದೆಯೇ? ಯೋಜನೆಗೆ ಅಗತ್ಯವಾದ ಹೂಡಿಕೆ ಹಾಗೂ ಇತರ ಅನುಮತಿಗಳನ್ನು ಮಂಜೂರು ಮಾಡಲಾಗಿದೆಯೇ? ನ್ಯಾಯಮಂಡಳಿಯ ಹಿಂದಿನ ನಿಲುವು ಮತ್ತು ಕರ್ನಾಟಕದ ಹಿತಾಸಕ್ತಿಗಳನ್ನು ಪರಿಗಣಿಸಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ಪ್ರಸ್ತಾವನೆಯು ಕೃಷ್ಣಾ ನದಿ ನೀರಿನ ಹಂಚಿಕೆ, ಆಲಮಟ್ಟಿ ಜಲಾಶಯದ ಒಳಹರಿವು ಹಾಗೂ ಕೆಳಹಂತದ ರಾಜ್ಯಗಳ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ, ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಯೋಜನೆಯ ಕಾನೂನುಬದ್ಧತೆ, ಅನುಮತಿಗಳು ಮತ್ತು ಹಣಕಾಸು ನೆರವಿನ ಕುರಿತು ಸಮಗ್ರ ಸ್ಪಷ್ಟನೆ ನೀಡಬೇಕು. ಕರ್ನಾಟಕದ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಕೀಲರ ಮೇಲಿನ ಹಲ್ಲೆ ಕೊಲೆ ಕೊಲೆ ಯತ್ನಗಳಿಗೆ ಖಂಡನೆಹಾಸನ್‌ ಎಂದಿರುವ ಜಿಲ್ಲೆಯ ಹೆಸರನ್ನು ಹಾಸನ ಎಂದು ಮಾಡಲಾಗುವುದು: ಸಚಿವ ಕೆ. ಎಂ. ಶಿವಲಿಂಗೇಗೌಡಸಚಿವ ಕೆ. ಎಂ. ಶಿವಲಿಂಗೇಗೌಡ ಅವರಿಂದ ಹಸಿರು ಸಿರಿ ಸಾವಯವ ಗೊಬ್ಬರ ಉದ್ಘಾಟನೆಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ:  ಎಂ ಬಿ ಪಾಟೀಲಮಹಾರಾಷ್ಟ್ರದ ಕೃಷ್ಣಾ ನದಿ ನೀರು ತಿರುವು ಯೋಜನೆಗೆ ತೀವ್ರ ಆಕ್ಷೇಪ38 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭ : ಎಂ ಬಿ ಪಾಟೀಲಯಲಹಂಕ, ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭಿಸಿದ ಕಳಾಮಂದಿರ್  (SSKL) ನ 87ನೇ ಮಳಿಗೆಕೃಪಾ ಆಳ್ವರಿಗೆ ಆರು ವರ್ಷ ಉಚ್ಚಾಟನೆಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ ಎಂಜಿ ವಿಂಡ್ಸರ್ ಇಂಡಲ್ಜ್ ಎಡಿಷನ್’ ಅನ್ನು ಬಿಡುಗಡೆ