ಬೆಂಗಳೂರು : ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್* ಅವರ ಮಾರ್ಗದರ್ಶನದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಎರಡನೇ ವಿಶೇಷ ಫೋನ್-ಇನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು 10 ಅಹವಾಲುಗಳು ಸ್ವೀಕೃತವಾಗಿವೆ.
ಕಸ ಸಂಗ್ರಹಣೆ ವಾಹನಗಳು ಆಗಮಿಸದಿರುವುದು, ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು ಹಾಗೂ ರಸ್ತೆ ಸ್ವಚ್ಛತೆ ಕೈಗೊಳ್ಳದಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದ್ದಾರೆ.
*ಅಹವಾಲುಗಳ ವಿಭಾಗವಾರು ವಿವರ*
*ಸ್ವೀಕೃತವಾದ 10 ಅಹವಾಲುಗಳ ವಿವರ ಹೀಗಿದೆ:*
- ಕಸ ಸಂಗ್ರಹಣೆ ವಾಹನ ಆಗಮಿಸದಿರುವುದು – 8
- ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು – 1
- ರಸ್ತೆ ಗುಡಿಸುವ ಕಾರ್ಯ ಕೈಗೊಳ್ಳದಿರುವುದು – 1
ಕಸ ಸಂಗ್ರಹಣೆ ವಾಹನಗಳ ಸೇವೆಗೆ ಸಂಬಂಧಿಸಿದ ದೂರುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
*ಅಹವಾಲುಗಳ ವಿಲೇವಾರಿಗೆ ಕ್ರಮ*
ಸ್ವೀಕೃತ ಅಹವಾಲುಗಳನ್ನು ‘ಸಹಾಯ 2.0’ ವ್ಯವಸ್ಥೆಯಲ್ಲಿ ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗುತ್ತಿದೆ. ಅಹವಾಲುಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸಿ, ಅವುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
*ಏಳು ವಿಭಾಗಗಳಲ್ಲಿ ಮೈಕ್ರೋ ಪ್ಲಾನಿಂಗ್ ಅನುಷ್ಠಾನ*
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲು ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್ ಅನುಷ್ಠಾನಗೊಳಿಸಲಾಗುತ್ತಿದೆ. ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ಆಟೋ ಟಿಪ್ಪರ್‌ಗಳ ಮಾರ್ಗ ನಿಗದಿ, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ (BWG) ನಿರ್ವಹಣೆಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.
*ಪ್ರತಿ ಮಂಗಳವಾರ ಘನತ್ಯಾಜ್ಯ ನಿರ್ವಹಣೆಗೆ ವಿಶೇಷ ಫೋನ್-ಇನ್*
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ವಿಶೇಷ ಫೋನ್-ಇನ್ ಕಾರ್ಯಕ್ರಮ ನಡೆಸಲಾಗುತ್ತದೆ. ಕಸ ಸಂಗ್ರಹಣೆ ವಾಹನಗಳ ಸಮಯ, ವಾಹನಗಳು ಆಗಮಿಸದಿರುವುದು, ಪೌರಕಾರ್ಮಿಕರ ಸೇವೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ಈ ಕಾರ್ಯಕ್ರಮದ ಮೂಲಕ ಪಾಲಿಕೆಯ ಗಮನಕ್ಕೆ ತರಬಹುದು.
ಇತರೆ ನಾಗರಿಕ ಸಮಸ್ಯೆಗಳಿಗೆ ಪ್ರತಿ ಶುಕ್ರವಾರ ಆಯುಕ್ತರ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ನಗರವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ.
ಈ ಕಾರ್ಯಕ್ರಮದಲ್ಲಿ ಅಪರ ಆಯುಕ್ತರು (ಕಂದಾಯ - ಪ್ರಭಾರ) ಹಾಗೂ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಜಂಟಿ ಆಯುಕ್ತರಾದ ಶ್ರೀ ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಶ್ರೀ ಸೋಮಶೇಖರ, DGM ಶ್ರೀಮತಿ ರಶ್ಮಿ, AGM ಗಳು ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.