ಬೆಂಗಳೂರು : ದಸರಾ ಹಬ್ಬದ ಕಸ ಎಲ್ಲೆಂದರಲ್ಲಿ ಬಿಸಾಕಬೇಡಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಆಯುಕ್ತರಾದ ಜಗದೀಶ್ ಜಿ ರವರ ಮನವಿ ಮಾಡಿಕೊಂಡರು.
*ವ್ಯಾಪಾರಸ್ಥರು ಹಬ್ಬದ ಕಸ ಎಲ್ಲೆಂದರಲ್ಲಿ ಬಿಸಾಕಬೇಡಿ*
ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆ ಮಯ್ತು ಸುತ್ತಲಿನ ಪ್ರದೇಶ, ಗಾಂಧಿಬಜಾರ್ ಹಾಗೂ ಸುತ್ತಮುತ್ತಲಿನ ಸ್ಥಳಗಳು, ಆಟದ ಮೈದಾನಗಳ ಹತ್ತಿರ, ರಸ್ತೆಯ ಬದಿಗಳಲ್ಲಿ, ಓಣಿಗಳ/ ಗಲ್ಲಿಗಳ ಚಿಕ್ಕ ಚಿಕ್ಕ ಮಾರುಕಟ್ಟೆ ಸ್ಥಳಗಳಗಲ್ಲಿ ರೈತರು, ವ್ಯಾಪಾರಸ್ಥರು ಬಾಳೆ ದಿಂಡು, ಕುಂಬಳಕಾಯಿ, ಹೂವು, ಹಣ್ಣು ಹಂಪಲು ಇತರೆ ತಳಿರು ತೋರಣಗಳ ವಸ್ತುಗಳನ್ನು, ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು ಹಬ್ಬದ ಪ್ರಯುಕ್ತ ಮಾರಾಟಗಾರರಿಗೆ ಯಾವುದೇ ತೊಂದರೆ ಕೊಡುವುದಿಲ್ಲ.
ಆದರೆ ವ್ಯಾಪಾರಸ್ಥರು ಅವರು ವ್ಯಾಪಾರ ಮಾಡಿದ ನಂತರ ಉಳಿಯುವ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಪಾದಚಾರಿ ಮಾರ್ಗದಲ್ಲಿ, ರಸ್ತೆಯಲ್ಲೆಲ್ಲಾ ಕಸ ಎಸೆಯುವುದರಿಂದ ಕಸದ ರಾಶಿ ತುಂಬುತ್ತದೆ. ಇದರಿಂದ ಸಾರ್ವಜನಿಕರ, ವಾಹನಗಳ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಕಸದ ವಾಸನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಸಂದರ್ಭದಲ್ಲಿ ಮಳೆ ಬಂದಲ್ಲಿ ತ್ಯಾಜ್ಯವು ರಸ್ತೆಯಲ್ಲಿ ಹರಡಿಕೊಂಡು ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಹ ಅಡಚಣೆ ಉಂಟಾಗಲಿದೆ. ರಸ್ತೆ ಬದಿಯಲ್ಲಿ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕುವುದರಿಂದ ನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳಾದ ಪೌರಕಾರ್ಮಿಕರು ತ್ಯಾಜ್ಯವನ್ನು ತೆಗೆಯಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಹಾಗಾಗಿ ವ್ಯಾಪಾರಸ್ಥರು ವ್ಯಾಪಾರ ಮುಗಿದ ಮೇಲೆ ಉಳಿಯುವ ತ್ಯಾಜ್ಯವನ್ನು ನಿಗದಿಪಡಿಸಿದ ಸ್ಥಳದಲ್ಲಿ ತ್ಯಾಜ್ಯ ತಂದು ಹಾಕಲು ಆಯುಕ್ತರಾದ ಜಗದೀಶ್ ಜಿ ರವರು ವಿನಂತಿಸಿದ್ದಾರೆ.
*ಸಾರ್ವಜನಿಕರು ಹಬ್ಬದ ತ್ಯಾಜ್ಯ ರಸ್ತೆಗೆ ಸುರಿದು ಬ್ಲ್ಯಾಕ್ ಸ್ಪಾಟ್ ನಿರ್ಮಿಸಬೇಡಿ*
ಸಾರ್ವಜನಿಕರು ಹಬ್ಬದ ತ್ಯಾಜ್ಯವನ್ನು ರಸ್ತೆಯಲ್ಲಿ ಹಾಕುವುದರಿಂದ ಬ್ಲ್ಯಾಕ್ ಸ್ಪಾಟ್ ಗಳು ನಿರ್ಮಾಣಗೊಂಡು ನಗರ ಸೌಂದರ್ಯ ಹಾಳಾಗುವುದರ ಜೊತೆಗೆ ತ್ಯಾಜ್ಯದ ವಾಸನೆಯಿಂದ ಜನರನ್ನು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ಮನೆ ಮನೆಗೆ ಬರುವಾಗ ಆಟೋ ಟಿಪ್ಪರ್ ಗಳಿಗೆ, ಪೌರ ಕಾರ್ಮಿಕರಿಗೆ ತ್ಯಾಜ್ಯವನ್ನು ವಿಂಗಡಿಸಿ ನೀಡುವ ಮೂಲಕ ನಗರದ ಸ್ವಚ್ಛತೆ, ಸುಂದರತೆ ಹಾಗೂ ಆರೋಗ್ಯಕರ ವಾತಾವರಣ ರೂಪಿಸಲು ನಗರ ಪಾಲಿಕೆಗೆ ಸಹಕರಿಸಲು ಆಯುಕ್ತರಾದ ಜಗದೀಶ್ ರವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
*ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ*
ದಸರಾ ಹಬ್ಬದ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಹಬ್ಬದ ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಹಾಗೂ ಆಟೋ ಟಿಪ್ಪರ್ ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.