ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಗೂ ಉದಯೋನ್ಮುಖ ನಟ ಅನಂತನಾಗ್ ಅವರಿಗೆ ದೇಶದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದಕ್ಕೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ವಲಯಗಳು ಹಾಗೂ ಬಾಗಲಕೋಟೆ ಜಿಲ್ಲೆ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅನಂತನಾಗ್ ಅವರು ದಶಕಗಳ ಕಾಲ ಸಲ್ಲಿಸಿರುವ ಅಪೂರ್ವ ಸೇವೆ ಹಾಗೂ ತಮ್ಮ ವಿಭಿನ್ನ ನಟನಾ ಶೈಲಿಯ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಕನ್ನಡದ ಶ್ರೇಷ್ಠ ನಟನೆಯ ಸೇವೆಗೆ ದೊರೆತಿರುವ ನಿಜವಾದ ಗೌರವವಾಗಿದೆ. ತಮ್ಮ ಸಹಜ ಅಭಿನಯ, ವಿಭಿನ್ನ ಪಾತ್ರಗಳ ನಿರ್ವಹಣೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಅನಂತನಾಗ್ ಅವರು ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡದ ದಿಗ್ಗಜ ನಟ ಡಾ. ರಾಜಕುಮಾರ್ ಅವರ ಬಳಿಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಅನಂತನಾಗ್ ಪಾತ್ರರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಅವರ ಕಲಾಸೇವೆ ಮತ್ತು ಸಾಧನೆಗೆ ದೇಶದ ಅತ್ಯುನ್ನತ ಚಿತ್ರರಂಗದ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿ ಮತ್ತಷ್ಟು ಮೆರುಗು ನೀಡಿದೆ ಎಂದು ಅವರು
ಸಂತಸ ವ್ಯಕ್ತಪಡಿಸಿದ್ದಾರೆ.
ಅನಂತನಾಗ್ ಅವರ ಕಲಾ ಪಯಣವು ಹಲವು ತಲೆಮಾರುಗಳ ಕಲಾವಿದರು ಹಾಗೂ ಚಿತ್ರರಂಗದ ಅಭಿಮಾನಿಗಳಿಗೆ ಸ್ಫೂರ್ತಿದಾಯಕವಾಗಿದೆ. ಅವರ ಅಭಿನಯಕ್ಕೆ ಸಂದಿರುವ ಈ ಗೌರವವು ಕನ್ನಡ ಚಿತ್ರರಂಗದ ಶ್ರೀಮಂತ ಪರಂಪರೆಗೂ ಸಂದ ಗೌರವವಾಗಿದೆ. ಪ್ರಶಸ್ತಿ ಘೋಷಣೆಗೆ ಅನಂತನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಚಿವ ವಿಜಯಾನಂದ ಕಾಶಪ್ಪನವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.