ಬೆಂಗಳೂರು: ಸುರಭಾರತಿ ಸಂಸ್ಕೃತ,ಸಾಂಸ್ಕೃತಿಕ ಪ್ರತಿಷ್ಠಾನ, ಹೊರಮಾವು ವತಿಯಿಂದ ಪದ್ಮನಾಭನಗರದ ಶ್ರೀ ವಿಶ್ವನಾಥ ಶಾಸ್ತ್ರಿ ಅವರ ನಿವಾಸದ ಆವರಣದಲ್ಲಿ ಭಾನುವಾರ ಗುರುಪಾದುಕೆ ಪೂಜೆ, ಶೃಂಗೇರಿ ಶ್ರೀಗಳ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಪದ್ಮನಾಭನಗರದ ಪ್ರಮುಖ ರಸ್ತೆಗಳಲ್ಲಿ ಪೂಜ್ಯರ ಭಾವಚಿತ್ರದ ಮೆರವಣಿಗೆ, ಭಜನೆ ಹಾಗೂ ವೇದಘೋಷಗಳೊಂದಿಗೆ ಧಾರ್ಮಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ನಂತರ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಆಯೋಜಿಸಲಾಗಿದ್ದು,
ಸುರಭಾರತಿ ಸಂಸ್ಕೃತ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಗೌರವನ್ವಿತ ಅಧ್ಯಕ್ಷರಾದ ಮತ್ತು ಸಂಸ್ಕೃತ ಭಾಷೆ, ಸನಾತನ ಧರ್ಮದ ಅಭಿವೃದ್ಧಿಗೆ ಟಂಕ ಕಟ್ಟಿರುವ ಪೂಜ್ಯ ವಿದ್ವಾನ್ ಕೆ.ಎಲ್. ಶ್ರೀನಿವಾಸ್ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಸುಮಾರು 500ಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಉಪಹಾರ ಹಾಗೂ ಪ್ರಸಾದ ವಿತರಿಸಲಾಯಿತು.
ಸುರಭಾರತಿ ಸಂಸ್ಕೃತ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ 2027ರ ಜುಲೈ ತಿಂಗಳಲ್ಲಿ ಬೆಂಗಳೂರಿನ ಹೊರಮಾವಿನಲ್ಲಿ ಒಂದು ಲಕ್ಷ ಜನರಿಂದ ಲಲಿತಾ ಸಹಸ್ರನಾಮ ಪಾರಾಯಣ ಮಹಾಯಜ್ಞವನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಮಹತ್ವದ ಕಾರ್ಯಕ್ರಮದ ಕುರಿತು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಹಾಗೂ ಧಾರ್ಮಿಕ ಮನೋಭಾವವುಳ್ಳವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ ವಿವಿಧ ಪ್ರದೇಶಗಳಲ್ಲಿ ಭಜನೆ, ವೇದಘೋಷ ಹಾಗೂ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ವಿದ್ವಾನ್ ಕೆ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ಇಂದಿನ ಕಾರ್ಯಕ್ರಮವನ್ನು ಶ್ರೀ ವಿಶ್ವನಾಥ ಶಾಸ್ತ್ರಿ ಹಾಗೂ ಶ್ರೀಮತಿ ಸೀತಾಲಕ್ಷ್ಮೀ ದಂಪತಿಗಳು ವ್ಯವಸ್ಥಿತವಾಗಿ ನಡೆಸಿಕೊಟ್ಟರು.