ಬೆಂಗಳೂರು: ಇಸ್ಕಾನ್ ಬೆಂಗಳೂರು ತನ್ನ ನಾಲ್ಕು ದಿನಗಳ ಬ್ರಹ್ಮೋತ್ಸವ 2026 ಮಹೋತ್ಸವವನ್ನು ಕನಕಪುರ ರಸ್ತೆಯ ವೈಕುಂಠ ಗಿರಿಯ ದೇವಾಲಯದಲ್ಲಿ ಜೂನ್ 25ರಿಂದ 28ರವರೆಗೆ ಯಶಸ್ವಿಯಾಗಿ ಆಚರಿಸಿತು.
ಉತ್ಸವದಲ್ಲಿ ಒಂದು ಲಕ್ಷಕ್ಕೂಹೆಚ್ಚು ಭಕ್ತಾದಿಗಳು ಪಾಲ್ಗೊಂಡರು. ಶಾಸ್ತ್ರೋಕ್ತವಾದ ವಿಸ್ತೃತ ಅರ್ಚನಾ ವಿಧಿವಿಧಾನಗಳು, ಭಕ್ತಿಗೀತೆಗಳು, ಮತ್ತು ಆಧ್ಯಾತ್ಮಿಕ ಹುಮಸ್ಸನ್ನು ತುಂಬುವಂತಹ ಕಾರ್ಯಕ್ರಮಗಳು ಮತ್ತು ಪ್ರಸಾದ ವಿತರಣೆಯೊಂದಿಗೆ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಗರುಡ ಧ್ವಜಾರೋಹಣದೊಂದಿಗೆ ಆರಂಭಗೊಂಡ ಬ್ರಹ್ಮೋತ್ಸವವು ನಂತರ ಶ್ರೀ ರಾಧಾ ಕೃಷ್ಣ ಚಂದ್ರ ಅಭಿಷೇಕ, ಬ್ರಹ್ಮೋತ್ಸವ ಯಜ್ಞ, ಭವ್ಯ ಪಲ್ಲಕಿ ಉತ್ಸವ ಮತ್ತು ಆನಂದಮಯ ಉಯ್ಯಾಲೆ ಸೇವೆಯೊಂದಿಗೆ ನೆರವೇರಿತು. ಎರಡನೇ ದಿನ ರಾಜಗೋಪಾಲ ರುಕ್ಮಿಣಿ ಸತ್ಯಭಾಮಾ ಕಲ್ಯಾಣೋತ್ಸವ ನಡೆಯಿತು — ವೈದಿಕ ವಿಧಿ-ವಿಧಾನಗಳು, ಮಂತ್ರ ಘೋಷ ಮತ್ತು ಅಪೂರ್ವ ಪುಷ್ಪಾಲಂಕಾರಗಳೊಂದಿಗೆ ಆಚರಿಸಲ್ಪಟ್ಟ ಈ ದಿವ್ಯ ವಿವಾಹ ಮಹೋತ್ಸವ ಭಕ್ತರಲ್ಲಿ ಅಪಾರ ಆನಂದವನ್ನು ತುಂಬಿತು.
ಮೂರನೇ ದಿನ ಭಕ್ತರು ಉತ್ಸಾಹದಿಂದ ಪಾನಿಹಾಟಿ ಚಿಡಾ ದಹಿ ಉತ್ಸವದಲ್ಲಿ ಭಾಗವಹಿಸಿದರು. ಬಳಿಕ ವೈಕುಂಠ ಗಿರಿಯ ಪವಿತ್ರ ಕಲ್ಯಾಣಿಯಲ್ಲಿ ಶ್ರೀ ಗೌರಾಂಗ ಮತ್ತು ಶ್ರೀ ನಿತ್ಯಾನಂದ ಪ್ರಭುಗಳಿಗೆ ಮನಮೋಹಕ ನೌಕಾ ವಿಹಾರ ನಡೆಯಿತು. ನಾಲ್ಕನೇ ದಿನ ಅತ್ಯಂತ ವಿಶೇಷವಾಗಿತ್ತು — ಭಾರತದ ವಿವಿಧ ಪವಿತ್ರ ನದಿಗಳ ಜಲದಿಂದ ಶ್ರೀ ರಾಜಾಧಿರಾಜ ಗೋವಿಂದನಿಗೆ ಅಭಿಷೇಕ, ಭವ್ಯ ಪಲ್ಲಕಿ ಉತ್ಸವ ಮತ್ತು ಧ್ವಜಾವರೋಹಣ ಹಾಗೂ ಏಕಾಂತ ಸೇವೆಯೊಂದಿಗೆ ಉತ್ಸವ ಸಮಾರೋಪಗೊಂಡಿತು.
ನಾಲ್ಕು ದಿನಗಳು ನಡೆದ ಬ್ರಹ್ಮೋತ್ಸವದ ಆಚರಣೆಗಲ್ಲಿ ಮಾನ್ಯ ಕೇಂದ್ರ ಉಕ್ಕು ಮತ್ತು ಬ್ರಹತ್ ಕಾರ್ಖಾನೆ ಖಾತೆಯ ಮಂತ್ರಿಗಳು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸಾವಾಮಿಯವರು ರಾಜಾಧಿರಾಜ ಗೋವಿಂದನ ಅಭಿಷೇಕ ಸಮಾರಂಭದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು. ರಾಜಾಧಿರಾಜ ಗೋವಿಂದನ ಏಕಾಂತ ಸೇವೆಗೆ ಕಾಂತಾರ ಚಲನಚಿತ್ರದ 'ಬ್ರಹ್ಮಕಲಶ' ಗೀತೆಯ ಖ್ಯಾತ ಯುವ ಹಿನ್ನಲೆ ಗಾಯಕ, Abby V ಅವರು ಸಂಗೀತ ಸೇವೆ ನೀಡಿದರು. ಹಾಗೂ ಖ್ಯಾತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಸಮಾರಂಭದಲ್ಲಿ ಪಾಲ್ಗೊಂಡರು.
ಬ್ರಹ್ಮೋತ್ಸವ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧು ಪಂಡಿತ ದಾಸರು, "ಉತ್ಸವಗಳು ಭಕ್ತರಿಗೆ ಭಗವಂತನ ಸೇವೆ ಸಲ್ಲಿಸಲು ಮತ್ತು ಆತನ ಆಶೀರ್ವಾದ ಪಡೆಯಲು ದೊರೆಯುವ ಅಪೂರ್ವ ಅವಕಾಶಗಳು. ಭಗವಂತನ ಸೇವೆಯಲ್ಲಿ ಅಪಾರ ಆನಂದ ಮತ್ತು ತೃಪ್ತಿ ಲಭಿಸುತ್ತದೆ — ಇದುವೇ ಶಾಂತಿ ಮತ್ತು ಸುಖದ ಮಾರ್ಗ" ಎಂದು ನುಡಿದರು.
ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಭಗವಂತನ ಅಸೀಮ ದಿವ್ಯ ಕೃಪೆಯನ್ನು ಪಡೆದು ತುಂಬುಹೃದಯದೊಂದಿಗೆ ಹಿಂದಿರುಗಿದರು.